ಪವನವಿಜ್ಞಾನ -
	ವಾಯುಮಂಡಲ ಮತ್ತು ಅದರ ವಿದ್ಯಮಾನಗಳನ್ನು ಕುರಿತ ವಿಜ್ಞಾನ (ಮೀಟಿಯರಾಲಜಿ). ಪ್ರಧಾನವಾಗಿ ಇದೊಂದು ವೀಕ್ಷಣಶಾಸ್ತ್ರ. ಇದರ ದತ್ತಾಂಶಗಳು ಗೊತ್ತಾದವು. ಪವನವಿಜ್ಞಾನಿ ವಾಯುಮಂಡಲವನ್ನು ವೀಕ್ಷಿಸಿ ಅದರ ಉಷ್ಣತೆ, ಸಾಂದ್ರತೆ ಮಾರುತಗಳು, ಮೋಡಗಳು, ಅವಕ್ಷೇಪಣೆ(ಪ್ರೆಸಿಪಿಟೇಶನ್) ಮತ್ತು ಇತರ ವೈಲಕ್ಷಣ್ಯಗಳು ಇವನ್ನು ಸಂಗ್ರಹಿಸಿ ಇಂಥ ಸ್ಥಿತಿಗತಿ ತಲೆದೋರಲು ಕಾರಣಗಳೇನು ಎಂಬುದನ್ನು ಭೌತಶಾಸ್ತ್ರದ ಮೂಲ ನಿಯಮಾನುಸಾರ ವಿವರಿಸಲು ಪ್ರಯತ್ನಿಸುತ್ತಾನೆ.

	ಪ್ರಸಕ್ತ ಲೇಖನವನ್ನು ಈ ಮುಂದಿನ ಶೀರ್ಷಿಕೆಗಳ ಅಡಿಯಲ್ಲಿ ವಿಸ್ತರಿಸಿದೆ :
	1 ಪೀಠಿಕೆ
	2 ಹವೆ ಮತ್ತು ವಾಯುಗುಣ
	3 ವಾಯುವಿನ ಭೌತವೃತ್ತಾಂತ
	4 ಪವನವೈಜ್ಞಾನಿಕ ಉಪಕರಣಗಳು
	5 ಉನ್ನತ ವಾಯುಮಂಡಲದ ಸಂಶೋಧನೆ
	6 ವಾಯುಗುಣ ನಿಯಂತ್ರಣ
	8 ಹವಾ ಮನ್ಸೂಚನೆ

1 ಪೀಠಿಕೆ :  ಭೂಮಿಯನ್ನು ಆವರಿಸಿರುವ ವಾಯುಮಂಡಲದಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿಸುವ ಶಾಸ್ತ್ರವೇ ಪವನವಿಜ್ಞಾನ. ಅಖಂಡ ವಾಯುಮಂಡಲದ ದ್ರವ್ಯವಾಗಿರುವ ವಾಯುವಿನ ಬಗೆಗಿನ ಬದಲಾವಣೆಗಳನ್ನು ವಿಚಾರ ಮಾಡತಕ್ಕ ಭೂಭೌತ ವಿಜ್ಞಾನದ ಒಂದು ಶಾಖೆ ಇದು. ಆದರೂ ವಾಸ್ತವಿಕತೆಯ ಮತ್ತು ವೀಕ್ಷಣೆಯ ದೃಷ್ಟಿಯಿಂದ ಈ ಶಾಸ್ತ್ರದ ಅಧ್ಯಯನದಲ್ಲಿ ನಮ್ಮ ಮುಖ್ಯ ಲಕ್ಷ್ಯ ವಾಯುಮಂಡಲದಲ್ಲಿ 10-15 ಕಿಲೋಮೀಟರುಗಳ ಎತ್ತರದವರೆಗೆ ಇರುವ ಕೆಳಗಿನ ಮಟ್ಟಗಳಿಗೆ ಮಾತ್ರ ಸೀಮಿತವಾಗಿದೆ. ಈ ಪ್ರದೇಶಗಳಿಗೆ ಕ್ಷೋಭಮಂಡಲ (ಟ್ರೋಪೊಸ್ಫಿಯರ್) ಮತ್ತು ಸಮತಾಮಂಡಲ (ಸ್ಟ್ರ್ಯಾಟೊಸ್ಫಿಯರ್) ಎಂಬ ಹೆಸರುಗಳಿವೆ. ಇಲ್ಲಿ ನಡೆಯುವ ಬದಲಾವಣೆಗಳ ಒಟ್ಟು ಗುಣಕ್ಕೆ ಹವೆ (ವೆದರ್) ಎಂಬ ಸಾಮಾನ್ಯ ಪದವನ್ನು ಬಳಸುತ್ತೇವೆ.

	ವಾಯುಮಂಡಲದ ಕೆಳಗಿನ ಮಟ್ಟಗಳಲ್ಲಿ (ಅಂದರೆ, ಸುಮಾರು 15 ಕಿಲೋಮೀಟರ್‍ಗಳವರೆಗೆ) ಉತ್ಪನ್ನವಾಗುವ ಬದಲಾವಣೆಗಳ ಸ್ವರೂಪವನ್ನು ತಿಳಿಸುವ ವಾಯುಗುಣದ (ಕ್ಲೈಮೇಟ್) ವಿಚಾರವನ್ನು ಮಾತ್ರ ಈ ಲೇಖನದಲ್ಲಿ ಪ್ರಸ್ತಾವಿಸಲಾಗಿದೆ. ಈ ಬದಲಾವಣೆಗಳಿಗೂ ಮಾನವದೇಹದ ಅನುಭವಕ್ಕೂ ನಿಕಟಸಂಬಂಧ ಉಂಟು. ಎಂದೇ ಇದನ್ನು ಅರಿಯಲು ಮನುಷ್ಯನಿಗೆ ಬಲು ಕಾಲದಿಂದಲೂ ಆಸಕ್ತಿ ಇರುವುದಾಗಿದೆ.

	ಆಕಾಶದಲ್ಲಿ ಹಾರಿಸಲಾಗುತ್ತಿರುವ ಆಕಾಶಬುಟ್ಟಿ, ವಿಮಾನ ಮತ್ತು ರಾಕೆಟ್ ಮುಂತಾದ ಉಪಕರಣಗಳಿಂದ ವಾಯುಮಂಡಲದ ವಿವಿಧ ಮಟ್ಟಗಳ ವಿದ್ಯಮಾನಗಳು ವಿಶೇಷವಾಗಿ ಗೊತ್ತಾಗುತ್ತವೆ. ಇವುಗಳಲ್ಲಿ ಹಲವಾರು ಸ್ವಯಂಚಾಲಿತ ಮತ್ತು ಸ್ವಯಂಲೇಖಕ ಯಂತ್ರಗಳನ್ನು ಇಟ್ಟು ಕಳಹಿಸುತ್ತಾರೆ. ವಾಯುಮಂಡಲದ ಕೆಳಮಟ್ಟಗಳಲ್ಲಿ ಅಲ್ಲದೆ ಮತ್ತು 20-30 ಕಿಲೊಮೀಟರುಗಳ ಎತ್ತರದವರೆಗೆ ಕೂಡ ವಾಯುಗುಣದ ಹಲವಾರು ಅಂಗಗಳ ಬದಲಾವಣೆಗಳು ಗೋಚರವಾಗುತ್ತವೆ. ಇವುಗಳ ಜೊತೆಗೆ ಮಾನವನಿರ್ಮಿತ ಹವೋಪಗ್ರಹಗಳ ಸಹಾಯದಿಂದಲೂ ಅಪಾರವಾದ ಜ್ಞಾನ ಸಂಗ್ರಹಿಸಲ್ಪಟ್ಟು ಪವನಜ್ಞಾನದಕ್ಷೇತ್ರ ವಿವಿಧ ಮಾರ್ಗಗಳಲ್ಲಿ ವಿಸ್ತಾರತ್ತಿದೆ. ರೇಡಿಯೊ ಮುಂತಾದ ಹಲವಾರು ಅಂತಾರಾಷ್ಟ್ರೀಯ ವಾರ್ತಾಪ್ರಸಾರ ಸಂಸ್ಥೆಗಳ ಉಪಯುಕ್ತತೆ ಈ ಸಂಶೋಧನೆಗಳಿಂದ ಬಹಳ ಪರಿಣಾಮಕಾರಿಯಾಗುತ್ತಿದೆ. ಅತ್ಯಾಧುನಿಕ ಆಕಾಶಸಂಶೋಧನೆಗಳಿಗೂ ವಾಯುಮಂಡಲದ ವಿಜ್ಞಾನದ ಪ್ರಗತಿಗೂ ಸಂಪರ್ಕ ಕಲ್ಪಿತವಾಗಿದೆ.

	2 ಹವೆ ಮತ್ತು ವಾಯುಗುಣ : ವಾಯುಮಂಡಲದ ಮುಖ್ಯ ಲಕ್ಷಣ ಚಲನೆ. ಅದರ ಸರ್ವಭಾಗಗಳಲ್ಲಿಯೂ ಸದಾ ಕಾಲ ಚಲನೆ ಇರುವುದರಿಂದ ಎಲ್ಲೆಡೆಗಳಲ್ಲಿಯೂ ಗುಣಗಳು ಕ್ಷಣಕ್ಷಣಕ್ಕೂ ಬದಲಾವಣೆ ಹೊಂದುತ್ತಿರುವುವು. ಈ ಬದಲಾವಣೆಗಳ ಪರಂಪರೆಯೇ ಹವೆ ಕಾಲ ದೇಶಗಳಿಗೆ ಅನುಗುಣವಾಗಿ ಸಂಭವಿಸುವ ಬದಲಾವಣೆಗಳಿಗೆ ನಿರ್ದಿಷ್ಟ ಪರಿಮಿತಿಗಳಿರುತ್ತವೆ. ಹವೆಯಲ್ಲಿ ಅಡಗಿರುವ ವಿವಿಧ ಅಂಗಗಳ ಮೌಲ್ಯಗಳನ್ನು ತಿಳಿದು ಅವುಗಳ ಒಟ್ಟು ಗುಣವನ್ನು ನಿರ್ಧರಿಸುವ ಅಂಕೆ ಅಂಶಗಳನ್ನು ಅವುಗಳ ವ್ಯಾಪ್ತಿಯನ್ನೂ ಸೂಚಿಸುವಾಗ ವಾಯುಗುಣ (ಕ್ಲೈಮೇಟ್) ಎಂಬ ಪದವನ್ನು ಉಪಯೋಗಿಸುತ್ತೇವೆ. ವಾಯುಗುಣವನ್ನು ವಿಮರ್ಶೆ ಮಾಡುವ ಶಾಸ್ತ್ರದ ಭಾಗಕ್ಕೆ ವಾಯುಗುಣಶಾಸ್ತ್ರ (ಕ್ಲೈಮೆಟಾಲಜಿ) ಎಂದು ಹೆಸರು.

	ನಿರ್ದಿಷ್ಟ ಸ್ಥಳದಲ್ಲಿ ಇಲ್ಲವೇ ಗೊತ್ತಾದ ವಿಸ್ತಾರ ಪ್ರದೇಶದಲ್ಲಿ ವಾತಾವರಣದ ಸರಾಸರಿ ಪರಿಸ್ಥಿತಿ ಅದರ ವಾಯುಗುಣದಿಂದ ಗೊತ್ತಾಗುತ್ತದೆ. ಇದನ್ನು ಅರಿಯಬೇಕಾದರೆ ದೈನಂದಿನ ಬದಲಾವಣೆಗಳನ್ನು ಹೊಂದುತ್ತಿರುವ ಕೆಲವು ಅಂಗಗಳ ವಿಚಾರಗಳನ್ನೂ ಅವುಗಳ ಋತುಭೇದಗಳನ್ನೂ ನಿರ್ಧರಿಸಬೇಕಾಗುತ್ತದೆ. ಹೀಗೆ ತಿಳಿಯಬೇಕಾದ ಕೆಲವು ಮುಖ್ಯ ಅಂಗಗಳು ಇವು: ಉಷ್ಣತೆ, ವಾಯುವಿನ ಒತ್ತಡ, ಆದ್ರ್ರತೆ ಅಥವಾ ನೀರಿನ ಆವಿಯ ಪ್ರಮಾಣ, ವಾಯುವೇಗ, ದ್ರವೀಭೂತ ವಸ್ತುಗಳು (ಹಿಮ,ಮಂಜು,ಮಳೆ,), ವಿಕಿರಣ, ದೃಗ್ಗೋಚರತ್ವ ಮೋಡಗಳ ಸಮೀಕ್ಷೆಗಳು. ಇವಲ್ಲದೆ ಬಿಸಿಲು ಕಾಯುವ ಕಾಲ ಮತ್ತು ಮಿಂಚು ಗುಡುಗುಗಳಂಥ ವಿಶೇಷ ಘಟನೆಗಳನ್ನು ಕೂಡ ಸೇರಿಸಿಕೊಳ್ಳಬಹುದು.

	ವಾಯುಮಂಡಲಕ್ಕೆ ಸಂಬಂಧಪಟ್ಟ ವಿಜ್ಞಾನವನ್ನು ಅಧ್ಯಯನ ಮಾಡಲು ಮೂರು ಮುಖ್ಯ ಅಂಗಗಳನ್ನು ನಿರ್ದೇಶಿಸಬಹುದು : 1 ವಾಯುವಿನ ಸಾಮಾನ್ಯ ಭೌತವಿಜ್ಞಾನ. ಹವೆ ಮತ್ತು ವಾಯುಗುಣದ ಪರಿಶೀಲನೆಗೆ ಅತ್ಯಗತ್ಯವಾದ ತಿಳಿವಳಿಕೆಯನ್ನು ಈ ಪ್ರಧಾನಶಾಖೆಯಲ್ಲಿ ಅರಿಯಲು ಸಾಧ್ಯವಾಗುತ್ತದೆ ; 2 ವಿಸ್ತಾರ ವ್ಯಾಪ್ತಿಯುಳ್ಳ ಹಲವು ಪ್ರದೇಶಗಳಲ್ಲಿ ಏಕಕಾಲದಲ್ಲಿ ಮಾಡಿದ ಸಮೀಕ್ಷೆಗಳ ಸಮಗ್ರ ಅವಲೋಕನವನ್ನು ಮಾಡುವುದರ ಮೂಲಕ ವಾಯುವಿನ ಚಲನವಲನಗಳ ರೂಪಗಳನ್ನು ತಿಳಿಯಬಹುದು ; ಉಷ್ಣಚಲನಶಾಸ್ತ್ರ ಮತ್ತು ದ್ರವಚಲನಶಾಸ್ತ್ರಗಳ ಅನ್ವಯ ಇದಕ್ಕೆ ಸಹಕಾರಿಯಾಗುವುದು ; ಇದು ಸಂಗ್ರಹಣೆಯ ಪವನವಿಜ್ಞಾನ ; 3 ಗತಿಪವನವಿಜ್ಞಾನದಲ್ಲಿ ಹವೆಯ ಭವಿಷ್ಯದ ವಿಚಾರವಾಗಿ ಮುನ್ಸೂಚನೆಯನ್ನು ಕೊಡಲುಬೇಕಾದ ಶಾಸ್ತ್ರೀಯ ಆಧಾರ ದೊರಕುತ್ತದೆ.

	3 ವಾಯುವಿನ ಭೌತವೃತ್ತಾಂತ : ಶುಷ್ಕ ವಾಯುವಿನ ಘಟಕಳಾಗಿರುವ ಪ್ರಮುಖ ಅನಿಲಗಳು ಮತ್ತು ಅವುಗಳ ಶೇಕಡ ಗಾತ್ರ ಪ್ರಮಾಣಗಳು ಈ ರೀತಿ ಇವೆ :

	ಸಾರಜನಕ (ಓ2) 78.09
	ಆಮ್ಲಜನಕ (ಔ2) 20.95
	ಆರ್ಗಾನ್ (ಂಡಿ) 0.92
	ಇಂಗಾಲಾಮ್ಲ (ಅಔ 2) 0.03

	ಉಳಿದ ಅಪೂರ್ವ ಅನಿಲಗಳು : ನಿಯಾನ್ (ಓe), ಹೀಲಿಯಮ್ (ಊe) ಕ್ರಿಪ್ಟಾನ್ (ಏಡಿ2)  ಜಲಜನಕ (ಊ2) ಕ್ಸಿನಾನ್ (ಘಿe) ಇತ್ಯಾದಿ  0.017 ಕ್ಕಿಂತ ಕಡಿಮೆ.

	50 ಕಿಮೀಗಿಂತ ಎತ್ತರದಲ್ಲಿರುವ ಆಮ್ಲಜನಕದ ಅಣು ಔ2 ಕ್ರಮೇಣ ಔ ಪರಮಾಣುಗಳ ರೂಪಕ್ಕೆ ವಿಭಜನೆ ಹೊಂದುತ್ತವೆ ಇವುಗಳಲ್ಲದೆ ನೀರಾವಿ ಮತ್ತು ಓಜೋóನುಗಳು ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುವ ಪ್ರಮಾಣಗಳಲ್ಲಿ ಇದ್ದೇ ಇರುತ್ತವೆ. ಸುಮಾರು 25 ಕಿಮೀಗಳು ಎತ್ತರದಲ್ಲಿ ಒಜೋóನಿನ ಪ್ರಮಾಣ ಅತಿ ಹೆಚ್ಚಾಗಿರುವುದು ಇವೆರಡರ ಪ್ರಭಾವ ವಾಯುಗುಣದ ಲಕ್ಷಣದ ಮೇಲೆ ಹೆಚ್ಚಾಗಿರುವುದಕ್ಕೆ ಮುಖ್ಯ ಕಾರಣ ಸೂರ್ಯನ ಬೆಳಕು ಇವುಗಳ ಮೂಲಕ ಹಾಯುವಾಗ ಬೆಳಕಿನ ವಿವಿಧ ಅಲೆಯುದ್ಧಗಳ ಗ್ರಹಣಶಕ್ತಿಗಳ ಭೇದಗಳಿಂದ ಆಗುವ ಪರಿಣಾಮ.

	ವಾಯುಮಂಡಲದ ವಿವಿಧ ಮಟ್ಟಗಳು : ಉಷ್ಣತೆಯ ಆಧಾರದ ಮೇಲೆ ವಾಯುಮಂಡಲದಲ್ಲಿ ಹಲವು ಮುಖ್ಯ ಮಟ್ಟಗಳನ್ನು ಗುರುತಿಸಬಹುದು.
1 ಕ್ಷೋಭಮಂಡಲ (ಟ್ರೊಪೊಸ್ಫಿಯರ್) : ಉಷ್ಣವಲಯಗಳಲ್ಲಿ ಇದರ ಎತ್ತರ ಸುಮಾರು 16 ಕಿಮೀ. ಇತರ ಅಕ್ಷಾಂಶಗಳಲ್ಲಿ ಸುಮಾರು 10 ಕಿಮೀ. ಮೇಲಕ್ಕೆ ಹೋದಂತೆ ಪ್ರತಿ 1 ಕಿಮೀ ಉತ್ತರಕ್ಕೆ ಸರಾಸರಿ 60 ಅ ಯಷ್ಟು ಉಷ್ಣತೆ ತಗ್ಗುತ್ತದೆ. ಈ ಪ್ರದೇಶದಲ್ಲಿ ಯಾವುದಾದರೂ ಒಂದು ಎತ್ತರದ ಮಟ್ಟದಲ್ಲಿ ಸಮಭಾಜಕ ವೃತ್ತದಿಂದ ಧ್ರುವದ ವರೆಗೆ ಸರಾಸರಿ ಉಷ್ಣತೆ ಚಳಿಗಾಲದಲ್ಲಿ 400ಅ ಯಷ್ಟೂ ಬಿಸಿಲಕಾಲದಲ್ಲಿ 250ಅ ಯಷ್ಟು ಕಡಿಮೆ ಆಗುತ್ತದೆ.
2 ಸಮತಾಪಮಂಡಲ (ಸ್ಟ್ರ್ಯಾಟೊಸ್ಫಿಯರ್) : ಈ ಪ್ರದೇಶದಲ್ಲಿ ಎತ್ತರ ಏರಿದಂತೆಲ್ಲ ಉಷ್ಣತೆ ಹೆಚ್ಚು ಬದಲಾವಣೆಯಾಗದು. ಆದರೆ ಸುಮಾರು 50 ಕಿಮೀ ಎತ್ತರ ತಲಪುವಷ್ಟರಲ್ಲಿ ವೃದ್ಧಿ ಹೊಂದಿರುತ್ತದೆ.
3 ಮಧ್ಯಮಂಡಲ (ಮೆಸೊಸ್ಫಿಯರ್) : ಇದು 50-80 ಕಿಮೀ ವರೆಗೆ ಹಬ್ಬಿರುತ್ತದೆ. ಇದರಲ್ಲಿ ಉಷ್ಣತೆ ಕ್ರಮೇಣ ಇಳಿಯುತ್ತ - 800ಅ ಯನ್ನು ಮುಟ್ಟುತ್ತದೆ.
4 ಶಾಖಮಂಡಲ (ಥರ್ಮೊಸ್ಫಿಯರ್) ; 80 ಕಿಮೀಗಳಿಂದ ಮೇಲಿನ ಮಟ್ಟಗಳಲ್ಲಿ ಉಷ್ಣತೆ ಅನಿರ್ದಿಷ್ಟ ರೀತಿಯಲ್ಲಿ ಏರುತ್ತದೆ ಸೂರ್ಯರಶ್ಮಿಗಳಲ್ಲಿರುವ ಅತಿನೇರಿಳೆ ಮುಂತಾದ ವಿಕಿರಣಗಳ ಪ್ರಭಾವದಿಂದ ಅಲ್ಲಿ ಅಯಾನೀಕರಣವಾಗುವುದು. ರೇಡಿಯೊ ಅಲೆಗಳ ಪ್ರಸಾರಕ್ಕೂ ಶಾಖಮಂಡಲದ ರಚನೆಗೂ ನಿಕಟ ಸಂಬಂಧ ಉಂಟು.

	ಸೂರ್ಯನಿಂದ ಪ್ರವಹಿಸಿದ ವಿಕಿರಣ ವಾಯುಮಂಡಲದ ಮೇಲ್ಮಟ್ಟಗಳಿಂದ ಭೂಮಿಯ ಮೇಲ್ಮೈಯ ವರೆಗೆ ಹಾಯುವಾಗ ಮೊತ್ತಮೊದಲು ಅಯಾನ್ ಮಂಡಲದಲ್ಲಿ ಅತಿನೇರಿಳೆ ಮತ್ತು ಇನ್ನೂ ಕ್ರಮೇಣ ಕಡಿಮೆ ಅಲೆಯುದ್ದಗಳಿರುವ ಅಲೆಗಳ ಗ್ರಹಣವಾಗುತ್ತದೆ. ಇದರಿಂದ ಕ್ರಮೇಣ ಉಷ್ಣತೆಯ ಮಟ್ಟ ಇಳಿಯಲು ಕಾರಣವಾಗುವುದು. ಮಧ್ಯಮಂಡಲದಲ್ಲಿರುವ ಓeóÉೂೀನಿನಿಂದ ಅತಿನೇರಿಳೆಗೆ ಸಮೀಪದ ಅಲೆಗಳ ಗ್ರಹಣವಾಗುತ್ತದೆ. ಹೀಗಾಗಿ ಕೆಳಗಿನ ಮಟ್ಟಗಳಲ್ಲಿ ಓಜೋóನಿನ ಮೊತ್ತ ಕಡಿಮೆ ಇರುವುದು ಮತ್ತು ಉಷ್ಣತೆ ಇಳಿದಿರುವುದು. ಅತಿ ಕೆಳಗಿನ ವಲಯವಾದ ಕ್ಷೋಭ ಮಂಡಲದಲ್ಲಿ ನೀರಾವಿಯ ಮೊತ್ತ ಹೆಚ್ಚಾಗಿರುತ್ತದೆ ಮತ್ತು ಅತಿನೇರಳೆ ಅಲೆಗಳ ಗ್ರಹಣ ಅಲ್ಪವಾಗಿರುತ್ತದೆ. ಆದರೆ ಮೋಡಗಳಿಂದಲೂ ವಾಯುವಿನ ಅಣುಗಳಿಂದಲೂ ಚದರಿಕೆ ಹೆಚ್ಚಾಗುವುದು. ಅಲ್ಲದೇ ಭೂಮಿಯ ಮೇಲ್ಮೈಗೆ ಬೀಳುವ ಸೂರ್ಯೋಷ್ಣನ ಅಧಿಕಾಂಶ ಗ್ರಹಣವಾಗುತ್ತದೆ. ಉಷ್ಣ ಪುನಃ ಭೂಮಿಯ ಮೇಲಕ್ಕೆ ಏರುತ್ತದೆ. ಅಂದರೆ ವಾಯುಮಂಡಲದಲ್ಲಿ ಉಷ್ಣ ಕೆಳಗಿನಿಂದ ಮೇಲಕ್ಕೆ ನಯನಹೊಂದುತ್ತದೆ. ಈ ವಿವಿಧ ಮಾರ್ಪಾಡುಗಳಿಂದ ಉಷ್ಣತೆ ಗೊತ್ತಾದ ಒಂದು ರೀತಿಯಲ್ಲಿ ಕ್ಷೀಣಿಸುತ್ತ ಹೋಗುವುದು. ವಾಯುಮಂಡಲದಲ್ಲಿ ಸೂರ್ಯ ಕಿರಣಗಳ ಪ್ರಸಾರದಲ್ಲಿ ಆಗುವ ಗ್ರಹಣಕ್ಕೂ ಭೂಮಿಯ ಮೇಲ್ಮೈಯಿಂದ ಹೊರಬೀಳುವ ಉಷ್ಣದ ಪ್ರಸಾರಕ್ಕೂ ನಡುವೆ ಸಮತೋಲ ಏರ್ಪಡುತ್ತದೆ. ಗಾಳಿ ಚಲನೆಯೂ ಈ ಸಮತೋಲ ರಚನೆಯಲ್ಲಿ ಮುಖ್ಯ ಪಾತ್ರವಹಿಸುವುದು.

	ವಾಯುಒತ್ತಡ ಮತ್ತು ಪವನಗಳು : ವಾಯುಮಂಡಲದ ಯಾವುದಾದರು ಒಂದು ಮಟ್ಟದಲ್ಲಿರುವ ವಾಯುಒತ್ತಡ ಅಲ್ಲಿಂದ ಮೇಲಕ್ಕೆ ಹಬ್ಬಿರುವ ಅಖಂಡ ವಾಯುಮಂಡಲದ ಎತ್ತರದಿಂದ ನಿರ್ಧರಿಸಲ್ಪಡುತ್ತದೆ. 2 ಚದರ ಸೆಂಟಿಮೀಟರ್ ಸಲೆಯ ಮೇಲೆ ಆ ಎತ್ತರದ ಆಕೃತಿಯ ಸ್ತಂಭದಲ್ಲಿರುವ ವಾಯುತೂಕದ ಮೊತ್ತವೇ ವಾಯುಒತ್ತಡವನ್ನು ಸೂಚಿಸುವ ಸಂಖ್ಯೆ. ಸಮುದ್ರ ಮಟ್ಟದಲ್ಲಿ ಶಿಷ್ಟ ವಾಯುಭಾರಮಾನ ಸುಮಾರು 76 ಸೆಂಮೀ ಎತ್ತರದ ಪಾದರಸ ಸ್ತಂಭಕ್ಕೆ ಸಮಾನವಾಗಿರುತ್ತದೆ. ಇದನ್ನು ಶಾಸ್ತ್ರೀಯ ಮಾನಕದ ದೃಷ್ಟಿಯಿಂದ ಸುಮಾರು 1013.2 mb (ಮಿಲಿ ಬಾರ್) ಎಂದು ಗಣಿಸಲಾಗುತ್ತದೆ. ಸಮುದ್ರಮಟ್ಟಕ್ಕಿಂತ ಮೇಲಕ್ಕೆ ಹೋದಂತೆಲ್ಲ ವಾಯುಭಾರಮಾನ ಕಡಿಮೆ ಆಗುತ್ತ ಹೋಗುವುದು. ವಾಯುಸಾಂದ್ರತೆ ಹೆಚ್ಚಾಗಿರುವಾಗ ಈ ಇಳಿತದರ ಹೆಚ್ಚಾಗಿಯೂ ವಾಯು ಉಷ್ಣತೆ ಹೆಚ್ಚಾಗಿದ್ದು ಸಾಂದ್ರತೆ ಕಡಿಮೆಯಾದಾಗ ಇದು ಕಡಿಮೆಯಾಗಿಯೂ ಇರುವುವು. ವಿವಿಧ ಮಟ್ಟಗಳಲ್ಲಿ ಇರುವ ಉಷ್ಣತೆ, ವಾಯುಭಾರಮಾನ ಇವುಗಳ ವ್ಯತ್ಯಾಸದಿಂದ ಮತ್ತು ಭೂಮಿಯ ಆವರ್ತನೆ ಇವುಗಳಿಂದಾಗುವ ಪರಿಣಾಮಗಳಿಂದ ಮಾರುತಗಳ ವೇಗ ಮತ್ತು ಗಮನ ಮಾರ್ಗಗಳಲ್ಲಿ ಬದಲಾವಣೆಯಾಗುತ್ತ ಹೋಗುತ್ತದೆ.

	ವಾತಾವರಣದಲ್ಲಿ ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿಯೂ ಗಾಳಿಯ ಚಲನೆ ಅತಿ ಹೆಚ್ಚಾಗಿ ಅಕ್ಷಾಂಶದ ವೃತ್ತಗಳ ಹಾದಿಯಲ್ಲಿರುತ್ತವೆ. ಈ ವಲಯದ ಚಲನೆಗಳಲ್ಲಿ ಉದ್ಭವಿಸುವ ಬದಲಾವಣೆಗಳೆಲ್ಲವೂ ಅಕ್ಷಾಂಶ ಮತ್ತು ಎತ್ತರಗಳನ್ನು ಅವಲಂಬಿಸುವುವು. ಉಷ್ಣವಲಯಗಳಲ್ಲಿ ಈ ಮಾರುತಗಳು ಪೂರ್ವದಿಂದಲೂ ಮಧ್ಯ ಅಕ್ಷಾಂಶಗಳಲ್ಲಿ ಪಶ್ಚಿಮದಿಂದಲೂ ಕಾಣಿಸಿಕೊಳ್ಳುತ್ತವೆ. ಸಮಭಾಜಕ ವೃತ್ತವನ್ನುಳಿದು ಮಿಕ್ಕವಲಯಗಳಲ್ಲಿ ವಾಯುವಿನ ವೇಗ ಮೇಲಕ್ಕೆ ಏರಿದಂತೆಲ್ಲ ವೃದ್ಧಿ ಹೊಂದುತ್ತದೆ. ಕ್ಷೋಭಮಂಡಲದ ಮೇಲ್ಮಟ್ಟಗಳಲ್ಲಿ ಮಾರುತಗಳ ವೇಗ ಮತ್ತು ಗಮನಮಾರ್ಗಗಳಲ್ಲಿ ಬದಲಾವಣೆಗಳಾಗುತ್ತವೆ.

	ನೀರಾವಿ, ಮಳೆ ಮತ್ತು ಮೋಡಗಳು : ವಾಯಮಂಡಲದಲ್ಲಿ ವಾಯುಚಲನೆ ಸಾಮಾನ್ಯವಾಗಿ ಒಂದೇ ಸಮತಲದಲ್ಲಿ ಇರುವುದಿಲ್ಲ. ವಿಶಾಲವ್ಯಾಪ್ತಿಯುಳ್ಳ ಪ್ರದೇಶಗಳ ದೃಷ್ಟಿಯಲ್ಲಿ ಮೇಲಕ್ಕೂ ಕೆಳಕ್ಕೂ ಚಲಿಸುವ ಗಾಳಿಯ ವೇಗ ಸೆಕೆಂಡಿಗೆ ಕೆಲವು ಸೆಂಟಿಮೀಟರುಗಳಷ್ಟಿದ್ದರೂ ಯಾವುದಾದರೂ ಒಂದು ಸ್ಥಾನದಲ್ಲಿ ಈ ವೇಗ ಹಲವಾರು ಮೀಟರುಗಳಷ್ಟು ಬದಲಾವಣೆ ಹೊಂದಬಹುದು. ಗಾಳಿ ವೇಗದಿಂದ ಮೇಲಕ್ಕೆ ಏರುತ್ತಿರುವಾಗ ಕ್ರಮೇಣ ಕಡಿಮೆಯಾಗುತ್ತಿರುವ ವಾಯುಭಾರ ಪ್ರದೇಶದ ಮೂಲಕ ಹಾಯುತ್ತದೆ. ಇದರಿಂದ ವಾಯುಗಾತ್ರ ಹಿಗ್ಗಿ ಅದರ ಉಷ್ಣತಾ ಮಟ್ಟ ಇಳಿದು ತಂಪಾಗುತ್ತದೆ. ಹೀಗೆಯೇ ಕೆಳಕ್ಕೆ ಇಳಿಯುತ್ತಿರುವ ಗಾಳಿ ಸಂಕೋಚನ ಗೊಂಡು ಅದರ ಉಷ್ಣತಾಮಟ್ಟ ವೃದ್ಧಿಹೊಂದುತ್ತದೆ. ಇದೇ ಅಲ್ಲದೇ ಗಾಳಿಯ ಜೊತೆಯಲ್ಲಿ ಯಾವಾಗಲೂ ಬೇರೆ ಬೇರೆ ಮೊತ್ತಗಳ ಜಲಾಂಶ ಕೂಡಿರುವುದರಿಂದ,  ಮೇಲಕ್ಕೆ ಏರುತ್ತಿರುವ ಗಾಳಿ ತಂಪಾಗಿ ಒಂದು ಉಷ್ಣತಾಮಟ್ಟಕ್ಕೆ ಇಳಿದಾಗ ಆ ಕ್ಷೇತ್ರದಲ್ಲಿ ಸಂತುಷ್ಟ ಸ್ಥಿತಿಯನ್ನು ಮುಟ್ಟುವ ಸಂಭವವಿರುತ್ತದೆ. ಹೀಗಾದಾಗ ಗಾಳಿಯಲ್ಲಿರುವ ಆಧಾರಕೇಂದ್ರಗಳ ಮೇಲೆ ಹನಿಕೂಡುವಿಕೆ ಉಂಟಾಗಿ ಅದು ಮೋಡವಾಗಿ ಪರಿಣಮಿಸುತ್ತದೆ. ಮೋಡಗಳ ರೂಪರೇಖೆಗಳಿಗೆ ವಿವಿಧ ಮಟ್ಟಗಳಲ್ಲಿ ಭಿನ್ನಸ್ವರೂಪ ಇರುವುದು. ಅತಿ ಎತ್ತರದಲ್ಲಿರುವ ಮೋಡಗಳು ತೆಳ್ಳಗಿರುವ ಸಣ್ಣ ರೇಖೆಗಳ ಸಮೂಹದಂತೆ ಹಬ್ಬುತ್ತವೆ. ಇವುಗಳಿಗೆ ಸ್ಟ್ರ್ಯಾಟಸ್ ಮೋಡಗಳೆಂದು ಹೆಸರು. ಇನ್ನೂ ಕೆಳಗಿನ ಮಟ್ಟಗಳಲ್ಲಿ ಇವು ಸಣ್ಣ ಸಣ್ಣ ಕುರಿ ತುಪ್ಪಟದ ಸಮೂಹವಾಗಿ ಕಾಣಿಸಿಕೊಳ್ಳುತ್ತವೆ. ಇವು ಆಲ್ಟೊ ಸ್ಟ್ರ್ಯಾಟಸ್. ಇನ್ನೂ ಕೆಳಗಿನ ಮಟ್ಟಗಳಲ್ಲಿ ಈ ಮೋಡಗಳು ದಟ್ಟವಾಗಿಯೂ ಕಪ್ಪಗೂ ಇರುವ ಕಾರ್ಮೋಡಗಳಾಗಿ ಇಡೀ ಆಕಾಶವನ್ನೇ ಮುಚ್ಚುತ್ತವೆ. ಇವಕ್ಕೆ ಕ್ಯುಮುಲೋನಿಂಬಸ್ ಎಂದು ಹೆಸರು. ಈ ಮೋಡಗಳಿಂದಲೇ ಮಳೆ ಬೀಳುವ ಪರಿಸ್ಥಿತಿಯುಂಟಾಗುವುದಾಗಿದೆ. ಇವೆಲ್ಲವೂ ಕ್ಷೋಭಮಂಡಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. 

	ವಾತಾವರಣದಲ್ಲಿ ಕಾಣಿಸಿಕೊಳ್ಳುವ ಮಿಂಚು, ಗುಡುಗು ಮುಂತಾದ ವಿದ್ಯಮಾನಗಳು ಇಡೀ ವಾತಾವರಣವೇ ಒಂದು ವಿದ್ಯುತ್ ಕ್ಷೇತ್ರ ಎಂಬುದಕ್ಕೆ ನಿದರ್ಶನಗಳು. ವ್ಯತಿರಿಕ್ತ ವಿದ್ಯುದಾವೇಶವನ್ನು ಹೊತ್ತಿರುವ ಮೋಡದ ಸಮೂಹಗಳು ಚಲಿಸುತ್ತಿರುವಾಗ ಅವುಗಳ ನಡುವೆ ಹಠಾತ್ತನೆ ವಿದ್ಯುದ್ವಿಸರ್ಜನೆ ಆಗುತ್ತದೆ, ಇದೇ ಮಿಂಚು. ವಿದ್ಯುದ್ವಿಸರ್ಜನೆಯ ಪರಿಣಾಮವಾಗಿ ವಾಯು ಹಠಾತ್ತನೆ ವ್ಯಕೋಚಿಸುವುದು. ಆಗ ಗುಡುಗು ಮೊಳಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಹಠತ್ತಾಗಿ ವಾತಾವರಣದಲ್ಲಿ ಉದ್ಭವಿಸುವ ಬದಲಾವಣೆಗಳಿಂದ ಪ್ರಚಂಡಮಾರುತಗಳು ಉತ್ಪನ್ನವಾಗಿ ನೂರಾರು ಕಿಲೋಮೀಟರುಗಳು ವಿಸ್ತಾರದಲ್ಲಿ ಧಾರೆಧಾರೆಯಾಗಿ ಮಳೆಗಳು ಪ್ರವಾಹಗಳೂ ಸಂಭವಿಸುತ್ತವೆ.

	ಗಾಳಿಯ ಚಲನವಲನಗಳು : ಮಾರುತಗಳು ಮತ್ತು ಪ್ರಚಂಡ ಮಾರುತಗಳು ಪ್ರಪಂಚದ ನಕ್ಷೆಯ ಮೇಲೆ ಒಂದೇ ಮೌಲ್ಯದ ಗಾಳಿಯ ಒತ್ತಡಗಳಿರುವ ಪ್ರದೇಶಗಳನ್ನು ಸೇರಿಸುವ ರೇಖೆಗಳಿಗೆ ಸಮದಾಬಗಳೆಂದು (ಐಸೊಬಾರ್ಸ್) ಹೆಸರು ಹೀಗೆ ರೇಖೆಗಳನ್ನು ಚಿತ್ರಿಸಿದರೆ. ಅವುಗಳ ಸುತ್ತ ಗಾಳಿಗಳು ಸಾಮಾನ್ಯವಾಗಿ ಕಡಿಮೆ ಒತ್ತಡ ಪ್ರದೇಶಗಳಿಗೆ ಚಲಿಸುತ್ತವೆ. ಇವು ಉತ್ತರಾರ್ಧಗೋಳದಲ್ಲಿ ತಮ್ಮ ಎಡಕ್ಕೆ ಕಡಿಮೆ ಒತ್ತಡಗಳನ್ನೂ ಬಲಕ್ಕೆ ಹೆಚ್ಚು ಒತ್ತಡಗಳನ್ನೂ ಇಟ್ಟು ಕೊಂಡು ಚಲಿಸಿದರೆ ದಕ್ಷಿಣಾರ್ಧಗೋಳದಲ್ಲಿ ವಿರುದ್ಧ ಮಾರ್ಗಗಳಲ್ಲಿ ಚಲಿಸುತ್ತವೆ. ಬೇಸಗೆ ಮತ್ತು ಚಳಿಗಾಲದಲ್ಲಿ ಸಮಭಾಜಕವೃತ್ತದ ಸುತ್ತ ಏಕರೀತಿಯಾದ ಒತ್ತಡವುಳ್ಳ ಸ್ಥಾನ ಸಮಭಾಜಕವೃತ್ತದ ಉತ್ತರಕ್ಕೆ ಇದ್ದು ಉತ್ತರದ ಬೇಸಗೆಯಲ್ಲಿ ಉತ್ತರದ ಕಡೆಗೂ ಉತ್ತರದ ಚಳಿಗಾಲದಲ್ಲಿ ದಕ್ಷಿಣಾಭಿಮುಖವಾಗಿಯೂ ಚಲಿಸುತ್ತದೆ. ಇದರಿಂದ ಸಾಗರಗಳ ಮೇಲೆ ಹೆಚ್ಚು ಒತ್ತಡದ ಮೇಖಲೆಗಳು ಪ್ರಬಲವಾಗಿದ್ದು ಪೂರ್ವಾಭಿಮುಖವಾದ ಮಾರುತಗಳು ಉತ್ಪನ್ನವಾಗುತ್ತವೆ. ಇವುಗಳ ಶಾಖೆಗಳು ಸಮಭಾಜಕವೃತ್ತದ ಕಡೆಗೆ ಇದ್ದು, ಉತ್ತರಾರ್ಧದಲ್ಲಿ ಈಶಾನ್ಯಾಭಿಮುಖವಾಗಿಯೂ ದಕ್ಷಿಣಾರ್ಧದಲ್ಲಿ ಆಗ್ನೇಯಾಭಿಮುಖವಾಗಿಯೂ ಉಂಟಾಗುತ್ತವೆ. ಇವುಗಳಿಗೆ ವ್ಯಾಪಾರಮಾರುತಗಳೆಂದು ಹೆಸರು. ಚಕ್ರವಾತ (ಸೈಕ್ಲೋನ್) ಎಂಬುದು ಕಡಿಮೆ ಒತ್ತಡದ ಪ್ರದೇಶ ಮತ್ತು ಅದರೊಂದಿಗೆ ಹಬ್ಬುವ ಗಾಳಿಗಳು, ಪ್ರತಿಚಕ್ರವಾತ (ಆಂಟಿಸೈಕ್ಲೋನ್) ಎಂಬುದು ಹೆಚ್ಚು ಒತ್ತಡದ ಪ್ರದೇಶ. ಉತ್ತರಾರ್ಧಗೋಳದಲ್ಲಿ ಗಾಳಿಗಳು ಅಪ್ರದಕ್ಷಿಣವಾಗಿ ಸುಳಿಯುತ್ತವೆ ಮತ್ತು ಪ್ರತಿಚಕ್ರವಾತದಲ್ಲಿ ಇವು ಪ್ರದಕ್ಷಿಣವಾಗಿ ಹಬ್ಬುತ್ತವೆ. ಕೆಳಗಿನ ಅಕ್ಷಾಂಶಗಳಿಂದ ಏರುವ ಬಿಸಿ ಗಾಳಿಗಳೂ ಉನ್ನತ ಅಕ್ಷಾಂಶಗಳಿಂದ ಇಳಿಯುವ ಶೀತಗಾಳಿಗಳೂ ಉಷ್ಣದ ಗಾಳಿಯ ಉಬ್ಬುಗಳನ್ನು ಉಂಟುಮಾಡಿ ಮೇಲಕ್ಕೆ ಎತ್ತುತ್ತವೆ. ಹೀಗಾಗಿ ಕಡಿಮೆ ಒತ್ತಡ ಪ್ರದೇಶದ ಕೇಂದ್ರ ಉತ್ಪತ್ತಿ ಆಗುವುದು. ಬಿಸಿ ಮತ್ತು ತಂಪು ಗಾಳಿಗಳ ಸಂಪರ್ಕದಿಂದ ಹನಿ ಗೂಡಿಕೆ ಅಥವಾ ಸಾಂದ್ರೀಕರಣ ಉಂಟಾಗಿ ಇದರಿಂದ ವಿಸರ್ಜಿಸಲ್ಪಟ್ಟ ಉಷ್ಣಗಾಳಿಯ ಉಷ್ಣತೆಯನ್ನು ಹೆಚ್ಚಿಸಿ ಹಗುರ ಮಾಡಿ ಗಾಳಿಯನ್ನು ಮೇಲಕ್ಕೆ ಎಬ್ಬಿಸುತ್ತದೆ. ಇದರ ಜೊತೆಗೆ ಮುಂಗಡ ಚಲನೆ ತೆಲೆದೊರಿ ಹಠತ್ತಾಗಿ ಪ್ರಚಂಡ ಚಕ್ರವಾತಗಳು ಉತ್ಪನ್ನವಾಗುತ್ತವೆ.

	ಪವನವೈಜ್ಞಾನಿಕ ಉಪಕರಣಗಳು :  ವಾಯುಮಂಡಲದಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿಯಲು ಹವೆಗೆ ಸಂಬಂದಿಸಿದ ವಿವಿಧ ಅಂಗಗಳನ್ನು ಅಳೆದು ಅವುಗಳ ಪ್ರಮಾಣಗಳನ್ನು ನಿರ್ದೇಶಿಸಲು ಹಲವಾರು ಸೂಕ್ಷ್ಮಯಂತ್ರವಿಧಾನಗಳು ನಿರ್ಮಿತವಾಗಿವೆ. ಇವನ್ನು ವೇಧಶಾಲೆಗಳಲ್ಲಿ ಸ್ಥಾಪಿಸಿರುತ್ತಾರೆ. ಇವು ವಾಯುವಿನ ಉಷ್ಣ ಒತ್ತಡ, ಜಲಾಂಶ ಪ್ರಮಾಣ, ಗಾಳಿ ಚಲಿಸುವ ದಿಕ್ಕು ಮತ್ತು ವೇಗ. ಮಳೆಯ ಅಳತೆ ಮತ್ತು ಮೋಡಗಳ ಪರೀಕ್ಷೆ ಮುಂತಾದ ಮುಖ್ಯ ಅಂಗಗಳಿಗೆ ಸಂಬಂಧಪಟ್ಟವು. ವೇಧ ಶಾಲೆಗಳಲ್ಲಿ ಸಂಗ್ರಹಿಸಲಾಗುವ ವೀಕ್ಷಣೆಗಳ ಉದ್ದೇಶಗಳಿವು: 
(1) ಹವಾ ಪರೀಕ್ಷೆ : ಒಂದು ಸ್ಥಾಪನದಲ್ಲಿ ಕಾಲಾನುಕ್ರಮಕ್ಕೆ ಬದಲಾಗುವ ವಾಯುಗುಣದ ಸ್ಥೂಲಗಳನ್ನು ಪರಿಶೀಲಿಸುವುದು.
(2) ಸಮಗ್ರ ಸಮೀಕ್ಷೆ ; ವಿಶಾಲ ವ್ಯಾಪ್ತಿ ಇರುವ ಪ್ರದೇಶದಲ್ಲಿ ಹಲವಾರು ಆಲಯಗಳನ್ನು ಸ್ಥಾಪಿಸಿ ಅಲ್ಲಿ ಶೇಖರಿಸಲಾಗುವ ಎಲ್ಲ ಮಾಹಿತಿಗಳನ್ನು ಕ್ರೋಡೀಕರಿಸಲಾಗುವುದು. ವಿವಿಧ ಔನ್ಯತ್ಯಗಳಲ್ಲಿ ಹಲವಾರು ಕಡೆ ಈ ವೇಧಶಾಲೆಗಳು ನಿರ್ಮಿತ ವಾಗಬೇಕು. ಒಂದು ದಿವಸದ ಅವಧಿಯಲ್ಲಿ ಹತ್ತಾರು ನಿರ್ದಿಷ್ಟ ಕಾಲಗಳಲ್ಲಿ ಉಪಕರಣಗಳಿಂದ ಅಳೆಯಲಾಗುವ ವಿವಿಧ ಅಂಶಗಳನ್ನು ಸಂಗ್ರಹಿಸಬೇಕು. ಇವನ್ನು ಅಧಾರವಾಗಿ ಇಟ್ಟುಕೊಂಡು ಎಲ್ಲ ಅಂಗಗಳನ್ನು ಒಟ್ಟುಗೂಡಿಸಿ, ಹವಾ ಮುನ್ಸೂಚನೆಯನ್ನು ಕೊಡಬೇಕು. ಈ ಪರಿಶೀಲನೆ ಅತಿತ್ವರಿತವಾಗಿ ನಡೆಯಬೇಕಾಗಿರುವುದರಿಂದ ಬಹಳ ಸಮರ್ಥವಾದ ಗಣಕಗಳನ್ನು ಬಳಸಿ ಕಾಲವಿಳಂಬವಾಗದಂತೆ ಮುನ್ಸೂಚನೆಗಳನ್ನು ವಾರ್ತಾಸಂಸ್ಥೆಗಳ ಮೂಲಕ ಪ್ರಚುರಗೊಳಿಸಬೇಕಾಗುವುದು ಜರೂರಿನ ಕೆಲಸ.
(3) ವಿಶೇಷ ಕಾರ್ಯಚರಣೆಗಳಿಗೆ ಅನುಕೂಲವಾಗುವ ಸಮೀಕ್ಷೆಗಳು : ಇಂದಿನ ವಿಮಾನಯುಗದಲ್ಲಿ ಈ ಸಮೀಕ್ಷೆಗಳಿಗೆ ವಿಶೇಷ ಮಹತ್ವ ಉಂಟು. ವಿಮಾನಗಳು ಹಾರಾಡುತ್ತಿರುವಾಗ ಅವು ಸಾಗಬೇಕಾಗಿರುವ ಪ್ರದೇಶಗಳ ವಾತಾವರಣಗಳ ಮುನ್ಸೂಚನೆಗಳನ್ನು ಸಕಾಲಕ್ಕೆ ಒದಗಿಸುತ್ತಿರಬೇಕು. ಗಾಳಿ ಚಲಿಸುವ ದಿಕ್ಕು ಮತ್ತು ವೇಗಗಳಲ್ಲಿಯ ಭೇದಗಳು ವಿಮಾನನಿಲ್ದಾಣಗಳ ಸಮೀಪದಲ್ಲಿ ಮೇಘಾಚ್ಛಾದನೆ ದೃಗ್ಗೋಚರತ್ವ ಮುಂತಾದ ವಿಚಾರಗಳನ್ನು ತಿಳಿಸುವ ಮುನ್ಸೂಚನೆಗಳು ಅತ್ಯಾವಶ್ಯಕ ಮಾರ್ಗದರ್ಶಕಗಳು.
(4) ಸಂಶೋಧನೆ : ಅತ್ಯಾಧುನಿಕ ಉಪಕರಣಗಳ ನಿರ್ಮಾಣವಲ್ಲದಿದ್ದರೆ ವಾಯುಮಂಡಲ ವಿಜ್ಞಾನದಲ್ಲಿ ತಿಳಿವಳಿಕೆ ಮುಂದುವರಿದು ಪ್ರಗತಿ ಸಿದ್ಧಿಸುತ್ತಿರಲಿಲ್ಲ. ಸಂಶೋಧನೆ-ಉಪಕರಣನಿರ್ಮಾಣ ಒಟ್ಟೊಟ್ಟಿಗೆ ಸಾಗುತ್ತಿರಬೇಕು.

	ಈಗ ವಿವಿಧ ವೇದಶಾಲೆಗಳಲ್ಲಿ ಸ್ಥಾಪಿಸಲಾಗಿರುವ ಕೆಲವು ಪ್ರಮುಖ ಉಪಕರಣಗಳನ್ನು ನೋಡೋಣ. ವೇಧಶಾಲೆಗಳಿಂದ ಹೊರಬೀಳುವ ಅಂಕೆಅಂಶಗಳಿಗೆ ತೂಕಬರಬೇಕಾದ; ಅವು ಆಯಾ ಪ್ರದೇಶಗಳ ವಾಯುಗುಣದ ನೈಜಸ್ಥಿತಿಯನ್ನು ಪ್ರತಿಫಲಿಸಬೇಕು. ವೇಧಶಾಲೆಗಳ ಸಮೀಪದಲ್ಲಿ ವಾಯು ಅನಿರ್ಬಂಧಿತವಾಗಿ ಚಲಿಸಲು ಅವಕಾಶವಾಗಬೇಕು. ಸಮೀಪದಲ್ಲಿ ಸ್ವಲ್ಪದೂರದವರೆಗೆ ಎತ್ತರವಾದ ಮರಗಳಾಗಲಿ, ಬಹು ಅಂತಸ್ತುಗಳುಳ್ಳ ಕಟ್ಟಡಗಳಾಗಲಿ ಇರಕೂಡದು. ಯಂತ್ರಗಳು ಎಷ್ಟು ಎತ್ತರದಲ್ಲಿ ಸ್ಥಾಪಿತವಾಗಬೇಕು ಮತ್ತು ಅವುಗಳ ಅವರಣ ಯಾವ ರೀತಿ ಇರಬೇಕು ಇವೇ ಮುಂತಾದ ವಿಷಯಗಳಲ್ಲಿ ಸಾಮಾನ್ಯವಾಗಿ ಒಂದೇ ವಿಧವಾದ ನಿಯಮಗಳು ಎಲ್ಲ ರಾಷ್ಟ್ರಗಳಲ್ಲಿ ಆಚರಣೆಯಲ್ಲಿವೆ.

	ಉಷ್ಣತಾಮಾಪಕಗಳು : ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲಿಯೂ ಶುಷ್ಕಬುರುಡೆ, ಆದ್ರ್ರ ಬುರುಡೆ, ಗರಿಷ್ಠ ಮತ್ತು ಕನಿಷ್ಠ ಎಂಬ ನಾಲ್ಕು ವಿಧವಾದ ಉಷ್ಣತಾಮಾಪಕಗಳನ್ನು ಇಟ್ಟಿರುತ್ತಾರೆ. ವಿಶೇಷ ಪೆಟ್ಟಿಗೆರೂಪದ ಆವರಣಗಳಲ್ಲಿ ಇವನ್ನು ಇಡಲಾಗುತ್ತದೆ. ಸೂರ್ಯಕಿರಣಗಳು ನೇರವಾಗಿ ಇವುಗಳ ಮೇಲೆ ಬೀಳದಂತೆಯೂ ಇವುಗಳ ಒಳಗೆ ವಾಯುಚಲನೆಗೆ ಅವಕಾಶ ಇರದಂತೆಯೂ ಏರ್ಪಾಡು ಉಂಟು. ಶುಷ್ಕ ಬುರುಡೆ ಉಷ್ಣತಾಮಾಪಕ ವಾಯುಮಂಡಲದ ತಾತ್ಕಾಲಿಕ ಉಷ್ಣತೆಯ ಮಟ್ಟವನ್ನು ನೇರವಾಗಿ ಸೂಚಿಸುತ್ತದೆ. ಇದೇ ತರಹದ ಮತ್ತೊಂದು ಉಷ್ಣತಾಮಾಪಕವನ್ನು ಸ್ವಲ್ಪ ಸಮೀಪದಲ್ಲಿಯೇ ನೇತುಹಾಕಿರುತ್ತದೆ. ಅದರ ಬುರುಡೆ ಸುತ್ತಲೂ ಮಸ್ಲಿನ್ ಬಟ್ಟೆಯನ್ನು ಕಟ್ಟಿ ಅದರಿಂದ ಒಂದು ಬತ್ತಿಯನ್ನು ಹತ್ತಿರದಲ್ಲಿರುವ ನೀರಿನ ಕುಪ್ಪಿಯೊಳಗೆ ಇಳಿಬಿಟ್ಟಿರುವುದು. ಇದರಿಂದ ಆ ಮಸ್ಲಿನ್ ಬಟ್ಟೆ ಸದಾಕಾಲದಲ್ಲಿಯೂ ಒದ್ದೆಯಾಗಿಯೇ; ಇರುತ್ತದೆ. ಎಂದೇ ಆದ್ರ್ರ ಬುರುಡೆ ಎಂದು ಹೆಸರು. ಇದು ಸೂಚಿಸುವ ಉಷ್ಣತೆ ಸಾಮಾನ್ಯವಾಗಿ ಶುಷ್ಕಬುರಡೆಯದಕ್ಕಿಂತ ಕಡಿಮೆ. ಇದಕ್ಕೆ ಕಾರಣ ವಾಯುಮಂಡಲದಲ್ಲಿಯೂ ಜಲಾಂಶಪ್ರಮಾಣ. ಇದು ಹೆಚ್ಚಿದ್ದಷ್ಟೂ ಶುಷ್ಕ ಮತ್ತು ಆದ್ರ್ರ ಬುರುಡೆಗಳ ಉಷ್ಣತಾಂತರ ಕಡಿಮೆ ಇರುತ್ತದೆ. ವಾಯಮಂಡಲದ ಆದ್ರ್ರತೆ ಕಡಿಮೆಯಾಗಿ ಜಲಾಂಶ ಇಳಿಯುತ್ತ ಹೋದರೆ ಆದ್ರ್ರ ಬುರುಡೆಯಿಂದ ಹೆಚ್ಚು ನೀರಿನ ಕಣಗಳು ಸುತ್ತಲಿನ ವಾತಾವರಣಕ್ಕೆ ಆವಿಯ ರೂಪದಲ್ಲಿ ಬಾಷ್ಪೀಕರಿಸುತ್ತವೆ. ಅದರ ಉಷ್ಣತೆ ಇಳಿಯುತ್ತದೆ. ವಾತಾವರಣದಲ್ಲಿ ಮಳೆ ಬೀಳುತ್ತಿರುವಾಗ ಆದ್ರ್ರತೆ ಗರಿಷ್ಠ ಮಟ್ಟವನ್ನು (1000ಅ) ಮುಟ್ಟುವುರಿಂದ ಆದ್ರ್ರ ಬುರುಡೆಯಿಂದ ಬಾಪ್ಪೀಕರಣಕ್ಕೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ಅದರ ಉಷ್ಣತೆಯೂ ಶುಷ್ಕ ಬುರುಡೆಯದೂ ಒಂದೇ ಆಗಿರುತ್ತವೆ. ಹೀಗೆ ಒಂದು ದಿವಸದ 24 ಗಂಟೆಗಳ ಅವಧಿಯಲ್ಲಿ ಆದ್ರತೆ ಸತತವಾಗಿ ಬದಲಾವಣೆಯನ್ನು ಸೂಚಿಸಲು ಶುಷ್ಕ ಮತ್ತು ಆದ್ರ್ರ ಬುರುಡೆಗಳ ಉಷ್ಣತಾಂತರವನ್ನು ಅಳತೆ ಮೂಲಕ ತಿಳಿಯುವುದು ಬಲು ಸಹಾಯವಾಗಿರುತ್ತದೆ ಈ ಅಂತರದಿಂದ ಗುಣಿಸಿದ ಆದ್ರ್ರತೆಯ ಸಂಖ್ಯೆಗಳನ್ನು ತಿಳಿಯಲು ಪಟ್ಟಿಗೆಗಳುಂಟು. ಇವೇ ಅಲ್ಲದೆ ಗರಿಷ್ಠ ಮತ್ತು ಕನಿಷ್ಠ ಉಷ್ಣತಾಮಾಪಕಗಳಿಂದ ನಮಗೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಐದಿದ ಅತ್ಯಧಿಕ ಮತ್ತು ಅತಿ ಕಡಿಮೆ ಉಷ್ಣತೆಗಳು ಗೊತ್ತಾಗುತ್ತವೆ.

	ವಾಯುಭಾರಮಾಪಕ : ವಾಯುವಿನ ಒತ್ತಡದ ಬದಲಾವಣೆಗಳನ್ನು ಸೂಕ್ಷ್ಮಾವಾಗಿ ಅಳೆದು ತೋರಿಸುವ ಯಂತ್ರವಿದು. ವಾಯುಭಾರದ ಅಳತೆ ವಾಯುವಿನ ಉಷ್ಣತೆ ಮತ್ತು ಆದ್ರ್ರತೆಗಳ ಬದಲಾವಣೆಗಳಿಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಮಾರ್ಪಾಡು ಹೊಂದುತ್ತಹೋಗುತ್ತದೆ. ಶುಷ್ಕಹವೆಯ ಒತ್ತಡ ಹೆಚ್ಚಾಗಿದ್ದು. ಆದ್ರ್ರತೆ ಹೆಚ್ಚಿದಂತೆ ಒತ್ತಡ ಇಳಿಯುತ್ತ ಹೋಗುವುದು. ಕೆಲವು ವಿಶೇಷ ಸಂದರ್ಭಗಳಲ್ಲಿ ಸಾಮಾನ್ಯ ಮಿತಿಗಳಿಗಿಂತ ವಾಯುಭಾರ ಹಠಾತ್ತನೆ ಹೆಚ್ಚು ಗಮನಾರ್ಹವಾಗಿ ಇಳಿದಾಗ ವಾಯುಮಂಡಲದಲ್ಲಿ ಜಲಭರಿತವಾದ ಮೋಡಗಳೂ ಪ್ರಚಂಡ ಮಾರುತಗಳೂ ಹಬ್ಬಿ ಧಾರಾಕಾರವಾಗಿ ಮಳೆಯನ್ನು ಸುರಿಸುತ್ತವೆ. ಈ ಮೋಡಗಳು ಅತಿವೇಗದಿಂದ ನೂರಾರು ಕಿಲೋಮೀಟರುಗಳಷ್ಟು ದೂರ ಹಬ್ಬಿಹೋದ ಕಡೆಯಲ್ಲೆಲ್ಲ ಮಳೆ ವಿಶೇಷವಾಗಿ ಬೀಳಲು ಕಾರಣವಾಗುತ್ತವೆ. ಇಂಥ ವಿಶೇಷ ಸನ್ನಿವೇಶಗಳಲ್ಲಿ ವಾಯುಭಾರದ ಅಳತೆಗಳ ಅಂಕೆಅಂಶಗಳನ್ನು ಹಲವಾರು ಕಡೆಗಳಿಂದ ಪಡೆದು ಕಲೆಹಾಕಿ ಅವನ್ನು ನಕ್ಷೆಗಳ ರೂಪದಲ್ಲಿ ನಿರೂಪಿಸಿ ಈ ಮಾರುತಗಳ ಗಮನಮಾರ್ಗವನ್ನು ಶೋಧಿಸಿ ಹವಾಬದಲಾವಣೆಗಳ ಮುನ್ಸೂಚನೆಗಳನ್ನು ಕೊಡುತ್ತಾರೆ. ಸಕಾಲದಲ್ಲಿ ಬದಲಾವಣೆಗಳು ತಿಳಿದುಬಂದರೆ ಪ್ರವಾಹ ಮುಂತಾದ ಅನರ್ಥಗಳಿಂದ ಆಗಬಹುದಾದ ತೊಂದರೆಗಳನ್ನು ನಿವಾರಿಸಲು ಅವಕಾಶ ಸಿಗುತ್ತದೆ. ಜನ ಸಾಮಾನ್ಯರಿಗೂ ವಾಯುಮಂಡಲದಲ್ಲಿ ಹಾರಾಡುವ ವಿಮಾನಗಳಿಗೂ ರೈತಾಪಿ ಮಂದಿಗೂ ಈ ತಿಳಿವಳಿಕೆ ಬಲು ಉಪಯೋಗವಾದುದೆಂಬುದನ್ನು ಒತ್ತಿ ಹೇಳಬೇಕಾಗಿಲ್ಲ.

	ವಾಯುವೇಗವನ್ನೂ ಗಮನ ದಿಕ್ಕನ್ನೂ ತಿಳಿಸಲು ಪವನವೇಗಮಾಪಕ ಮತ್ತು ಪವನದಿಕ್ಸೂಚಿಗಳು ಇರುತ್ತವೆ. ಮಳೆಯನ್ನು ಅಳೆಯಲು ವರ್ಷಮಾಪಕಗಳನ್ನು ಗೊತ್ತಾದ ಸ್ಥಳಗಳಲ್ಲಿ ಇಟ್ಟಿರುತ್ತಾರೆ. 25 ಸೆಂಮೀ ವ್ಯಾಸವುಳ್ಳ ಪ್ರಣಾಳಿಯ ಮೂಲಕ ಬೀಳುವ ನೀರನ್ನು ಅದರ ಕೆಳಗೆ ಇಟ್ಟಿರುವ ಸೀಸೆಗಳಲ್ಲಿ ಶೇಖರಿಸಿ ಅದನ್ನು ಮಾಪಕಗಳಿಂದ ಅಳೆಯಲಾಗುತ್ತದೆ. ಮಿಲಿಮೀಟರ್ ಅಥವಾ ಸೆಂಟುಗಳಲ್ಲಿ ಇದನ್ನು ಸೂಚಿಸುವುದು ವಾಡಿಕೆ. 1.000 ಚದರ ಮೀಟರ್ ವಿಸ್ತೀರ್ಣದ ಮೇಲೆ 1 ಸೆಂಮೀ ಎತ್ತರ ನೀರು ತುಂಬುವಷ್ಟು ಮಳೆ ಸುರಿದರೆ ಒಟ್ಟು ನೀರಿನ ತೂಕ ಸುಮಾರು 9.885 ಕೆಜಿ ಇರುವುದು.

	ಸಣ್ಣ ವೇಧಶಾಲೆಗಳಲ್ಲಿ ಮೇಲೆ ತಿಳಿಸಿದ ಯಂತ್ರೋಪಕರಣಗಳಿಂದ ತಿಳಿದುಬರುವ ಅಂಶಗಳನ್ನು ನಿರ್ದಿಷ್ಟ ವೇಳೆಗಳಲ್ಲಿ ಮಾತ್ರ ಅಳೆದು ದೊಡ್ಡ ಕೇಂದ್ರಗಳಿಗೆ ತಂತಿ ಮೂಲಕ ತಿಳಿಯಪಡಿಸುತ್ತಾರೆ. ಕೆಲವು ದೊಡ್ಡ ಕೇಂದ್ರಗಳಲ್ಲಿ ಹಲವಾರು ಸೂಕ್ಷ್ಮ ಯಂತ್ರಸಾಧನೆಗಳಿಂದ ವಾಯುಗುಣದ ವಿವಿಧ ಅಂಗಗಳಲ್ಲಿ ಒಂದು ದಿವಸದ ಅವಧಿಯಲ್ಲಿ ಕ್ಷಣಕ್ಷಣಕ್ಕೂ ಆಗುವ ಬದಲಾವಣೆಗಳನ್ನು ನಿರೂಪಿಸುವ ಸ್ವಯಂಉಲ್ಲೇಖನ ಉಪಕರಣಗಳು ಇವೆ. ಇವುಗಳ ರೇಖಾನಕ್ಷೆಗಳ ಮೂಲಕ ಯಾವ ಹೊತ್ತಿನಲ್ಲಿಯೂ ಉಷ್ಣತೆ, ವಾಯುಭಾರ ಮುಂತಾದ ಹಲವು ಅಂಶಗಳು ಎಷ್ಟು ಇದ್ದುವು ಎಂಬುದನ್ನು ಸುಲಭವಾಗಿ ತಿಳಿಯಬಹುದು.
5 ಉನ್ನತ ವಾಯುಮಂಡಲದ ಸಂಶೋಧನೆ : 1749ರಲ್ಲಿ ಗಾಳಿಪಟಗಳ ಹಾರಾಟದ ಮೂಲಕ ಪರಿಶೀಲನೆಗಳನ್ನು ಅಲ್ಲಲ್ಲಿ ನಡೆಸಲಾಗಿತ್ತು. 19ನೆಯ ಶತಮಾನದಲ್ಲಿ ಆಕಾಶಬುಟ್ಟಿಗಳ ಮೂಲಕ ಸಂಶೋಧನೆ ಮುಂದುವರೆಯಿತು. ಅದರೆ ವ್ಯವಸ್ಥಿತ ರೀತಿಯಲ್ಲಿ ಕೆಲವು ವಿಶೇಷ ಯಂತ್ರಸಾಧನೆಗಳನ್ನು ಒಳಗೊಂಡ ಆಕಾಶ ವಿಮಾನಗಳ ಮೂಲಕ ವಿಷಯ ಸಂಗ್ರಹ ನಡೆದದ್ದು 1920ರಿಂದ ಈಚೆಗೆ. ವಾಯುಮಂಡಲದ ವಿವಿಧ ಮಟ್ಟಗಳಲ್ಲಿ ಮೂರು ಆಯಾಮಗಳ ವ್ಯಾಪ್ತಿ ಇರುವ ವಾತಾವರಣದ ಉಷ್ಣ, ವಾಯುಭಾರ, ಆದ್ರ್ರತೆ ಮುಂತಾದ ಅಂಗಗಳಲ್ಲಿ ನಡೆಯುವ ವಿದ್ಯಮಾನಗಳ ಕಡೆಗೆ ಗಮನವನ್ನು ಸೆಳೆಯುವ ಒಂದು ನವೀನ ದೃಷ್ಟಿ ಉಂಟಾಗಿದೆ. ಪಾದರಸವನ್ನು ಉಪಯೋಗಿಸುವ ಉಷ್ಣತಾಮಾಪಕಗಳೂ ವಾಯುಭಾರಮಾಪಕಗಳು ಇಲ್ಲಿ ಕೆಲಸಕ್ಕೆ ಬಾರವು. ಅತಿಸೂಕ್ಷ್ಮವೂ ಹಗುರವೂ ಆದ ಮಿಶ್ರಲೋಹಗಳಿಂದ ತಯಾರಿಸಿದ ಸಾಧನಗಳನ್ನು ನಿರ್ಮಿಸಬೇಕಾಗುತ್ತದೆ. ಅಲ್ಲದೆ ಅವು ಹೊಂದುವ ಬದಲಾವಣೆಗಳನ್ನು ಸೂಚಿಸುವ ಸ್ವಯಂಚಾಲಕ ಉಪಕರಣಗಳೂ ಬೇಕಾಗುತ್ತವೆ.
ರೇಡಿಯೊ ಸಾಂಡ್ : ಹಗುರವಾದ ಪುಟ್ಟ ವೇಧಶಾಲೆಯಂತೆ ವರ್ತಿಸುವ ಸಾಧವವಿದು. ಇದನ್ನು ಬೆಲೂನಗಳಲ್ಲಿಟ್ಟು ಮೇಲಕ್ಕೆ ಹಾರಿಸಲಾಗುತ್ತದೆ. ಬೆಲೂನುಗಳಿಗೂ ಭೂಮಿಯು ನಿರ್ದಿಷ್ಟ ಸ್ಥಾನಕ್ಕೂ ರೇಡಿಯೊ ಸಂಪರ್ಕ ಇರುವುದು. ವಾಯುಮಂಡಲದ ವಿವಿಧ ಅಂಗಗಳ ಪ್ರಮಾಣಗಳನ್ನು ಅಳೆದು ನಿರಂತರವಾಗಿ ಭೂವೀಕ್ಷಕರಿಗೆ ರೇಡಿಯೊಪ್ರಸಾರದ ಮೂಲಕ ಗೊತ್ತಾದ ಸಂಜ್ಞೆಗಳಲ್ಲಿ ಮಾಹಿತಿಗಳನ್ನು ಬಿತ್ತರಿಸಲಾಗುತ್ತದೆ. ಇದರ ಜೊತೆಗೆ ಪವನಗಳ ಗತಿಯನ್ನು ಸೂಚಿಸುವ ಸಂಜ್ಞೆಗಳನ್ನು ಹೊರಗೆಡಹುವಂತೆ ರೇಡಿಯೊ ಸಾಂಡ್ ಮತ್ತು ರೇಡಿಯೊವಿಂಡ್ ಸಂಸ್ಥೆ ಇರುತ್ತದೆ. ಮೇಲಕ್ಕೆ ಹಾರಾಡುವ ಬೆಲೂನಗಳ ಸ್ಥಾನವನ್ನು ಗಮನಮಾರ್ಗವನ್ನೂ ನಿರ್ದೇಶಿಸಲು ಅನುಕೂಲವಾಗುವಂತೆ ರೇಡಿಯೊಥಯೊಡಲೈಟ್ ಯಂತ್ರಗಳಿರುತ್ತವೆ. 
ನೂರಾರು ಮೀಟರುಗಳ ಮೇಲ್ಮಟ್ಟದಲ್ಲಿ ಹಾರಾಡುವ ಬೆಲೂನುಗಳು ಸುರಕ್ಷಿತವಾಗಿ ತಮ್ಮ ಕಾರ್ಯವನ್ನು ನಿರ್ವಹಿಸುವಂತೆ ಮಾಡಲು ವಿಶೇಷ ಗುಣಗಳಿಂದ ರಬ್ಬರುಗಳನ್ನು ತಯಾರಿಸಿದ. 30ಕಿಮೀ ಎತ್ತರದವರೆಗೆ ನಿಯೋಪ್ರಿನ್ ರಬ್ಬರ್ ಬೆಲೂನುಗಳನ್ನೂ ಅಲ್ಲಿಂದ ಮೇಲಿನ ಎತ್ತರದ ವೀಕ್ಷಣೆಗಳಿಗೆ ಮೈಲಾರಿನಿಂದ ಮಾಡಿದ ಬೆಲೂನುಗಳನ್ನೂ ಉಪಯೋಗಿಸುತ್ತಾರೆ. ಇನ್ನೂ ಎತ್ತರದ (ಅಂದರೆ ಸುಮಾರು 90 ಕಿಮೀಗಳಿಗಿಂತ ಮೇಲೆ ಪ್ರದೇಶಗಳಲ್ಲಿಯ ವಾತಾವರಣದ ಬದಲಾವಣೆಗಳನ್ನು ಅರಿಯಲು ರಾಕೆಟುಗಳ ಉಪಯೋಗವಾಗುತ್ತವೆ. 30 ಕಿಮೀ. ಎತ್ತರಕ್ಕಿಂತ ಮೇಲಿನ ಮಟ್ಟಗಳಲ್ಲಿ ಮಾರುತಗಳು ಸಂಚಾರಮಾರ್ಗಗಳು ಋತುಗಳ ಬದಲಾವಣೆಗಳಿಗೆ ಅನುಸಾರವಾಗಿ ಸಂಪೂರ್ಣವಾಗಿ ಪರಿವರ್ತಿತವಾಗುತ್ತವೆಂದು ತಿಳಿದುಬಂದಿದೆ. ಈ ಸಂಶೋಧನೆಗಳಲ್ಲಿ ರೇಡಾರ್ ಸಾಧನವೂ ಉಪಯುಕ್ತವಾಗಿರುತ್ತದೆ.

	ಕೃತಕ ಉಪಗ್ರಹಗಳು : ಆಕಾಶಸಂಶೋಧನೆಯಲ್ಲಿ ಕೃತಕ ಉಪಗ್ರಹಗಳು ಮುಖ್ಯ ಪಾತ್ರ ವಹಿಸುತ್ತವೆ. ಇವು ಭೂಮಂಡಲದ ಸುತ್ತಲೂ ಅತಿ ಎತ್ತರದಲ್ಲಿ ಕೇವಲ ಎರಡು ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪರಿಭ್ರಮಣೆ ಮುಗಿಸುವುದರಿಂದ ಇವುಗಳಲ್ಲಿ ಇಡಲಾಗಿರುವ ಯಂತ್ರಸಾಧನಗಳ ಸಹಾಯದಿಂದ ಭೂಗೋಳದ ಹಲವಾರು ವಾಯುನಿಲ್ದಾಣಗಳ ಮೂಲಕ ಅಖಂಡ ವ್ಯಾಪ್ತಿಯುಳ್ಳ ವಿದ್ಯಮಾನಗಳನ್ನು ಅತ್ಯಲ್ಪ ಕಾಲದಲ್ಲಿ ತಿಳಿಯಲು ಅನುಕೂಲವಾಗುತ್ತದೆ. ಇದೂ ಅಲ್ಲದೆ, ಅತ್ಯುನ್ನತ ಮಟ್ಟಗಳಿಂದ ವಿವಿಧ ಕೋನಗಳಲ್ಲಿ ಭೂಮಂಡಲವನ್ನು ವೀಕ್ಷಿಸಿ ಬದಲಾವಣೆಗಳ ಸ್ವರೂಪವನ್ನು ತಿಳಿಯಬಹುದು. ಉಪಗ್ರಹಕ್ಕೆ ದೂರದರ್ಶನ ಕ್ಯಾಮರವನ್ನು ಅಳವಡಿಸಿದರೆ, ಸೂರ್ಯನ ಬೆಳಕು ಬೀಳುವ ಪ್ರದೇಶಗಳ ಮೇಲೆ, ಮೋಡಗಳ ಸ್ವರೂಪ ಮತ್ತು ಗಾತ್ರಗಳನ್ನು ನಿರ್ದೇಶಿಸಬಹುದು. ಈ ರೀತಿಯಲ್ಲಿ ಅಮೆರಿಕದಲ್ಲಿ ಪೆಸಿಫಿಕ್ ಸಾಗರಕ್ಕೆ ಒಳಗಾಗುವ ಪ್ರದೇಶಗಳ ಮೇಲೆ ಉಂಟಾಗುವ ಪ್ರಚಂಡ ಮಾರುತಗಳ, ಮೋಡಗಳು ಮುಂತಾದ ವಿಚಾರಗಳನ್ನು ತಿಳಿದು ದೂರದರ್ಶನದ ಮೂಲಕ ಮುನ್ಸೂಚನೆ ಕೊಡಲು ಸಾಧ್ಯವಾಗಿದೆ.

	ವಾಯುಮಂಡಲಕ್ಕೆ ಸಂಬಂಧಪಟ್ಟ ದ್ಯುತಿವಿಜ್ಞಾನ : ಬೆಳಕಿನ ಕಿರಣಗಳನ್ನು ವಸ್ತುವಿನ ಅಣುಗಳು ಚದರಿಸುವಾಗ ಆ ಅಣುಗಳ ಅತ್ಯಲ್ಪ ಶಕ್ತಿಯನ್ನು ಒಳಗೊಂಡಿರುವುದರಿಂದ ಬೇರೆ ಬೇರೆ ಅಲೆಯುದ್ದಗಳಿರುವ ವಿವಿಧ ಬಣ್ಣಗಳ ಕಿರಣಗಳು ಭಿನ್ನ ಶಕ್ತಿಪ್ರಮಾಣಗಳಲ್ಲಿ ಹೊರಬೀಳುತ್ತವೆ. ನೀಲಿ ಅಂಚಿನ ಕಿರಣಗಳ ಅಲಿಯುದ್ದ ಅತಿ ಕಡಿಮೆ ಇರುವುದರಿಂದ ಅವು ಅತ್ಯಧಿಕ ಪ್ರಮಾಣದಲ್ಲಿ ಚದರಿಸಲ್ಪಡುತ್ತವೆ. ಈ ಕಾರಣದಿಂದಲೇ ಆಕಾಶ ನೀಲಿಯಾಗಿ ಕಾಣುತ್ತದೆ. ನೀರಿನ ತುಂತುರುಗಳು, ಮಂಜು, ಮೋಡ ಮತ್ತು ಮಳೆಹನಿಗಳ ಕಣಗಳ ಗಾತ್ರಗಳು ಹೆಚ್ಚಾಗಿರುವುದರಿಂದ ಅವು ಬೆಳಕನ್ನು ನಮನಮಾಡುತ್ತವೆ. ಅತ್ಯುನ್ನತ ಮಟ್ಟಗಳಲ್ಲಿ ನೀರಿನ ಕಣಗಳು ಸಣ್ಣ ಸಣ್ಣ ಮಂಜಗಡ್ಡೆಯ ಹರಳುಗಳು ರೂಪದ ಷಟ್ಕೋಣಾಕೃತಿಗಳಂತೆ ಇರುತ್ತವೆ. ಇವುಗಳ ಮೂಲಕ ಹಾಯುವ ಬೆಳಕಿನ ಕಿರಿಣಗಳು ರಶ್ಮಿಭಂಗವನ್ನು ಹೊಂದಿ, ಸೂರ್ಯನ ಸುತ್ತ ಪ್ರಕಾಶಮಾನವಾದ ಉಂಗುರಗಳು ತೋರುತ್ತವೆ. ಕೆಲವು ವೇಳೆ ಸೂರ್ಯನ ಸುತ್ತ  ಒಂದು ಪರಿವೇಷ ಕಾಣುವುದೂ ಉಂಟು. 

	6 ವಾಯುಗುಣ ನಿಯಂತ್ರಣ : ಮಾನವನ ಚಟುವಟಿಕೆಗಳೂ ನಿತ್ಯಜೀವನವೂ ಸಾಮಾನ್ಯವಾಗಿ ಅವನ ಸುತ್ತಮುತ್ತಲ ವಾತಾವರಣದಿಂದ ರೂಪಿತವಾಗುತ್ತವೆ. ಈ ಸ್ವಾಭಾವಿಕ ವಾತಾವರಣವನ್ನು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಒಳಪಡಿಸಿ ತನ್ನ ಅನುಭವಕ್ಕೆ ಹಿತವಾಗಿರುವಂತೆ ಮಾಡಲು ಆತನಿಗೆ ಸಾಧ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆಸಲಾದ ಹಲವಾರು ಸಂಶೋಧನೆಗಳನ್ನು ಆಧರಿಸಿ ತಯಾರಿಸಿದ ಉಪಕರಣಗಳಿಂದ ಇದು ಸಾಧ್ಯವಾಗಿದೆ. ವಾಯುಗುಣ ಹಿತಕರವಾಗಿರಬೇಕಾದರೆ ಅದರ ಉಷ್ಣತೆ ಒಂದು ಮಿತಿಯೊಳಗೆ ಇರಬೇಕು. ಜಲಾಂಶದ ಪ್ರಮಾಣವೂ ಆದಷ್ಟು ಕಡಿಮೆಯಾಗಿರಬೇಕು. ಶುದ್ಧ ವಾಯು ವೇಗದಿಂದ ಚಲಿಸುತ್ತಿರಬೇಕು. ಇವೆಲ್ಲವನ್ನು ಹದದಲ್ಲಿಟ್ಟರಲು ಯಂತ್ರಸಾಧನಗಳು ಬೇಕು. ಇಂಥ ಉಪಕರಣಗಳು ಈಗ ಬೃಹತ್ತಾದ ಮುಂತಾದವುಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ. ಹೀಗೆಯೇ ಸಕಾಲಕ್ಕೆ ಮಳೆಯಾಗದೆ ಅನಾವೃಷ್ಟಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಕೃತಕವಾಗಿ ಮಳೆಯನ್ನು ಉತ್ಪಾದಿಸಿ ಅದರಿಂದ ಪ್ರಯೋಜನಗಳನ್ನು ಪಡೆಯುವ ಪ್ರಯತ್ನಗಳು ತಕ್ಕಮಟ್ಟಿಗೆ ಯಶಸ್ಸು ಗಳಿಸಿವೆ.

	7 ಹವಾ ಮುನ್ಸೂಚನೆ : ವಾಯುಮಂಡಲದಲ್ಲಿ ನಡೆಯುವ ವಿಶೇಷ ವಿದ್ಯಮಾನಗಳನ್ನು ಯಂತ್ರಗಳ ಸಹಾಯದಿಂದ ತಿಳಿದು. ಅಂಕೆ ಅಂಶಗಳನ್ನು ಸಂಗ್ರಹಿಸಿ ಅವುಗಳ ಆಧಾರದ ಮೇಲೆ ವಾಯುಗುಣದ ಮುನ್ಸೂಚನೆಯನ್ನು ಪ್ರಸಾರ ಮಾಡುವುದು ವಾಡಿಕೆ. ಇಂಥ ಮುನ್ಸೂಚನೆ ಸಾಮಾನ್ಯವಾಗಿ ಮುಂದಿನ 24 ಗಂಟೆಗಳಲ್ಲಿ ನಡೆಯಬಹುದಾದ ಬದಲಾವಣೆಗಳನ್ನು ಸೂಚಿಸುವುದು. ಶಾಸ್ತ್ರೀಯ ದೃಷ್ಟಿಯಿಂದ ಮಾಡಲಾಗುವ ಈ ಭವಿಷ್ಯನುಡಿಗೆ ಹಲವಾರು ಪ್ರದೇಶಗಳಲ್ಲಿ ವಿವಿಧ ಕಾಲಗಳಲ್ಲಿ ಕ್ರೋಡೀಕರಿಸಲಾದ ಅಂಕೆ ಅಂಶಗಳೇ ಆಧಾರ. ಪ್ರಕೃತಿಯ ವಿದ್ಯಮಾನಗಳಲ್ಲಿ ನಿರ್ದಿಷ್ಟ ಕ್ರಮವಿದ್ದರೂ ಅನೇಕ ವೇಳೆಗಳಲ್ಲಿ ನಾವು ಊಹಿಸಲಾಗದಂಥ ಹಲವು ವಿಶೇಷ ಸಂಘಟನೆಗಳು ಉದ್ಭವಿಸುತ್ತವೆ. ಆದ್ದರಿಂದ ಭವಿಷ್ಯವನ್ನು ಎಚ್ಚರಿಕೆಯಿಂದ ನುಡಿಯಮಾಡಬೇಕು. ಅಲ್ಲದೆ ಇದು ಮುಂದೆ ಆಗಬಹುದಾದ ಬದಲಾವಣೆಗಳ ಸ್ವರೂಪವನ್ನು ಸಣ್ಣ ಅವಧಿಯಲ್ಲಿ ಮಾತ್ರ ತಿಳಸಬಹುದು ಅಷ್ಟೆ. ವಾಸ್ತವ ಅನುಭವಕ್ಕೂ ಈ ಭವಿಷ್ಯವಾದಿಗಳಿಗೂ ಇರಬಹುದಾದ ಅಂತರ ಕಡಿಮೆಯಾಗಬೇಕಾದರೆ ಪವನವಿಜ್ಞಾನದಲ್ಲಿ ಇನ್ನೂ ಹೆಚ್ಚು ತಿಳಿವಳಿಕೆ ಅವಶ್ಯ.
(ಕೆ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ